ಖೆಡ್ಡ -
ಕಾಡಾನೆಗಳನ್ನು ಸೆರೆಹಿಡಿದು ಪಳಗಿಸಲು ಯೋಜಿಸಿರುವ ಒಂದು ವಿಶೇಷ ಬಗೆಯ ಬೋನು. ಇಂಥ ಬೋನಿಗೆ ಆನೆಗಳನ್ನು ತರುಬುವ, ಅನಂತರ ಪಳಗಿಸುವ ವಿಸ್ತಾರವಾದ ಕಾರ್ಯಾಚರಣೆಗೆ ಖೆಡ್ಡ ಕಾರ್ಯಕ್ರಮವೆನ್ನುತ್ತಾರೆ. ಕಾಡಿನಲ್ಲಿ ಆನೆಗಳ ಸಂಖ್ಯೆ ಹೆಚ್ಚಾಗಿ ಅವು ಜನಗಳಿಗೂ ಬೆಳೆಗಳಿಗೂ ಹಾನಿಯುಂಟುಮಾಡತೊಡಗಿದಾಗ ಅವನ್ನು ಸೆರೆಹಿಡಿಯಲಾಗುತ್ತದೆ. ಒಂದೋ ಎರಡೋ ಪುಂಡಾನೆಗಳು ತೊಂದರೆ ಕೊಟ್ಟಾಗ ಅವನ್ನು ಬೆದರಿಸಿ ಕಾಡಿನ ಒಳಭಾಗಕ್ಕೆ ಅಟ್ಟುತ್ತಾರೆ. ಇಲ್ಲವೆ ಗುಂಡಿಟ್ಟು ಕೊಂದುಬಿಡುತ್ತಾರೆ. ಬಹುಸಂಖ್ಯೆಯಲ್ಲಿ ಅವನ್ನು ಹಿಡಿಯಬೇಕಾದಾಗ ಮಾತ್ರ ಖೆಡ್ಡ ಯೋಜನೆಯನ್ನು ಹಾಕಲಾಗುತ್ತದೆ. ಖೆಡ್ಡ ಎನ್ನುವ ಪದ ಹಿಂದುಸ್ಥಾನಿಯದು. ಸಣ್ಣ ಗುಂಡಿ ಎಂದು ಇದರ ಮೂಲಾರ್ಥ. ಹಿಂದೆ ಒಂದು ಕಾಲದಲ್ಲಿ ಕಾಡಾನೆಗಳನ್ನು ಹಿಡಿಯುವಾಗ ಕಂದಕಗಳನ್ನು ತೋಡುತ್ತಿದ್ದುದರಿಂದ ಈ ಪದಕ್ಕೆ ಈ ಅರ್ಥ ಬಂದಿದೆ. ಖೆಡ್ಡಕ್ಕೆ ಹಿಂದಿಯಲ್ಲಿ ಬಂಗಡಿ ಎಂದೂ ಕನ್ನಡದಲ್ಲಿ ಆನೆಪಂಗಡಿ ಎಂದೂ ಹೆಸರಿದೆ. ಈಚೆಗೆ ಆನೆಗಳನ್ನು ಹಿಡಿಯಲು ಗುಂಡಿಗಳನ್ನು ತೋಡುತ್ತಿಲ್ಲ. ಏಕೆಂದರೆ ಗುಂಡಿಗೆ ಕೆಡೆದು ಬೀಳುವ ಆನೆಗೆ ಊನವಾಗಬಹುದು. ಎಷ್ಟೋ ಆನೆಗಳು ಸಾಯಲೂಬಹುದು. ಆದ್ದರಿಂದ, ಈಗ ನೆಲಮಟ್ಟದಲ್ಲೇ ದಪ್ಪ ದಿಮ್ಮಿಗಳಿಂದ ದೊಡ್ಡ ಬೋನೊಂದನ್ನು ನಿರ್ಮಿಸಿ ಅದರಲ್ಲಿ ಆನೆಗಳನ್ನು ಬಂಧಿಸುತ್ತಾರೆ. ಈ ವಿಧಾನ ಮೈಸೂರಿನ ವೈಶಿಷ್ಟ್ಯಗಳಲ್ಲಿ ಒಂದೆನಿಸಿ ಪ್ರಸಿದ್ದವಾಗಿದೆ. ಹೈದರ್ ಅಲಿ, ಟಿಪ್ಪೂಸುಲ್ತಾನರ ಕಾಲದಿಂದಲೂ ಈ ಕಾರ್ಯವಿಧಾನವನ್ನು ಉತ್ತಮಪಡಿಸುತ್ತ ಬರಲಾಗಿದೆ. ಸದ್ಯಕ್ಕೆ ಮೈಸೂರಿನ ಕಾಕನಕೋಟೆ ಕಾಡಿನ ಕಾರಾಪುರ, ಚಾಮರಾಜನಗರ ತಾಲ್ಲೂಕಿನ ಬೂದಿಪಡಗ ಮುಂತಾದ ಸ್ಥಳಗಳಲ್ಲಿ ಖೆಡ್ಡ ಕಾರ್ಯಾಚರಣೆ ನಡೆಯುತ್ತಿದೆ. ಇದಕ್ಕೆ ಅಪಾರವಾದ ಹಣಸಹಾಯವೂ ಜನಸಹಾಯವೂ ಬೇಕಾಗುವುದರಿಂದ ಇಂಥ ಕಾರ್ಯಕ್ರಮವನ್ನು ಅಗತ್ಯ ಬಿದ್ದಾಗ ಮಾತ್ರ ಏರ್ಪಡಿಸಲಾಗುತ್ತದೆ. ಈಚೆಗೆ ಇದನ್ನು ಜನಪ್ರಿಯವಾಗಿ ಮಾಡಿರುವುದರಿಂದ ಸರ್ಕಾರಕ್ಕೆ ಸ್ವಲ್ಪಮಟ್ಟಿನ ಲಾಭವೂ ಜನಕ್ಕೆ ಮನೋರಂಜನೆಯೂ ಒದಗುತ್ತಿದೆ.

	ನದಿಯ ಒಂದು ಪಕ್ಕದಲ್ಲಿ ಖೆಡ್ಡ ಬೋನು ಇರುತ್ತದೆ. ಅದರ ಸುತ್ತಲೂ 8ರಿಂದ 9 ಅಡಿ ಆಳವಾದ ಕಂದಕವೊಂದು ಇರುತ್ತದೆ. ಕಾಡಿನಲ್ಲಿ ಹರಡಿ ಹೋಗಿರುವ ಆನೆಗಳನ್ನು ನದಿಯ ಮುಖಾಂತರ ಅಟ್ಟಿ ಖೆಡ್ಡದ ಒಳಕ್ಕೆ ಸೇರಿಸುವುದೇ ಇಷ್ಟೆಲ್ಲ ಏರ್ಪಾಡಿನ ಉದ್ದೇಶ. ಖೆಡ್ಡಕ್ಕೆ 3 ಪ್ರವೇಶದ್ವಾರಗಳಿರುತ್ತವೆ. ಒಂದೊಂದು ದ್ವಾರದ ಬಳಿಯೂ ಉದ್ದನೆಯ ಕಾಡುಮರಗಳ ಕಂಬಗಳನ್ನು ಆಳವಾಗಿ ಹೂಳಲಾಗಿದ್ದು ಒಂದೊಂದು ಅಡ್ಡಪಟ್ಟಿಗಳಿರುವ ಒರಟು ಬಗೆಯ ಬಾಗಿಲನ್ನು ಅಳವಡಿಸಲಾಗಿರುತ್ತದೆ. ಈ ಬಾಗಿಲುಗಳು ಮೇಲಿನಿಂದ ಕೆಳಕ್ಕೆ ಮುಚ್ಚಿಕೊಳ್ಳುವಂತಿರುತ್ತವೆ. ಇವಕ್ಕೆ ಬಂಗಾಳದ ಕುಸಿಯುವ ಬಾಗಿಲುಗಳು ಎಂದು ಹೆಸರು. ಖೆಡ್ಡದಿಂದ 10-12 ಮೈಲಿಗಳ ವರೆಗೆ ಓಡಾಡಲು ಅನುಕೂಲವಾಗುವಂತೆ ನೇರದಾರಿಗಳನ್ನೂ ಅಡ್ಡದಾರಿಗಳನ್ನೂ ಮಾಡಿರುತ್ತಾರೆ. ಸೆರೆಸಿಕ್ಕುವ ಮೊದಲು ಆ ಮೇಲೂ ಆನೆಗಳಿಗೆ ಅಸಹಜವೆನ್ನಿಸದಂತೆ ಈ ದಾರಿಗಳನ್ನು ಸೊಪ್ಪು ಸದೆಗಳಿಂದ ಮುಚ್ಚಿಬಿಡಲಾಗುತ್ತದೆ. ನೇರದಾರಿಗೂ ಅಡ್ಡದಾರಿಗೂ ನಡುವೆ ಏರ್ಪಡುವ ಒಂದೊಂದು ಆವರಣವೂ ಸುಮಾರು 5-10 ಚದರಮೈಲಿ ವಿಸ್ತಾರವಾಗಿದ್ದು ಒಂದೊಂದರಲ್ಲೂ ಒಂದು ವಾರದವರೆಗೆ ಆನೆಗಳಿಗೆ ಸಾಕಾಗುವಷ್ಟು ನೀರು, ಹುಲ್ಲು ಮತ್ತು ಇತರ ಆಹಾರವಸ್ತುಗಳ ಸೌಲಭ್ಯವನ್ನೇರ್ಪಡಿಸಿರುತ್ತಾರೆ. ಆನೆಗಳು ನದಿಯ ಇನ್ನೊಂದು ದಡದಿಂದಲೂ ಬರಬಹುದಾದ ಕಾರಣ ಅಲ್ಲೂ ಇದೇ ಬಗೆಯ ಆವರಣಗಳನ್ನೇರ್ಪಡಿಸಿರುತ್ತಾರೆ.

ಕಾರ್ಯಾಚರಣೆ : ಆನೆಗಳನ್ನು ಸೆರೆಹಿಡಿಯುವುದಕ್ಕೆ 3 ತಿಂಗಳ ಮುಂಚೆಯೇ ಚಟುವಟಿಕೆ ಆರಂಭವಾಗುತ್ತದೆ. ಇದಕ್ಕೆ ಸಿದ್ದತೆಗಳಲ್ಲಿ ಮುಖ್ಯವಾದವು ಇವು : (1) ಕಂದಕದಲ್ಲಿನ ಮಣ್ಣು ಕಸ ಮುಂತಾದವನ್ನು ತೆಗೆದು ಹಾಕುವುದು. (2) ಬಾಗಿಲುಗಳ ರಿಪೇರಿ ಮತ್ತು ಅವಶ್ಯಕವಾದರೆ ಹೊಸ ಬಾಗಿಲುಗಳ ನಿರ್ಮಾಣ. (3) ಆನೆಗಳಿಗೆ ಹಗ್ಗ ಬಿಗಿಯಲು ಅಗತ್ಯವಾದ ಕಿರು ಆವರಣಗಳ ನಿರ್ಮಾಣ. (4) ನದಿಗಿಳಿದ ಆನೆಗಳು ಅಕಸ್ಮಾತ್ ತಪ್ಪಿಸಿಕೊಂಡು ಹೋಗಬಹುದಾದ್ದರಿಂದ ಇಂಥ ಅವಕಾಶವಿರುವೆಡೆಯಲ್ಲೆಲ್ಲ ಬಲವಾದ ಕಂಬಗಳನ್ನು ನೆಟ್ಟು ಅಡ್ಡಿ ಏರ್ಪಡಿಸುವುದು. (5) ದಂಡಗಳನ್ನೇರಿ ಆನೆಗಳು ತಪ್ಪಿಸಿಕೊಳ್ಳಬಹುದಾದ್ದರಿಂದ ನದೀದಡವನ್ನು ಕಡಿದಾಗಿರುವಂತೆ ಕೊರೆಯುವುದು. (6) ನದಿಯ ಮೂಲಕ ಆನೆಗಳನ್ನು ಖೆಡ್ಡ ಆವರಣದೊಳಕ್ಕೆ ಓಡಿಸುವ ನಯನ ಮನೋಹರವಾದ ದೃಶ್ಯವನ್ನು ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಬರುವ ಜನಕ್ಕೆ ಅನುಕೂಲವಾಗುವಂತೆ ಎತ್ತರವಾದ ವೇದಿಕೆಗಳನ್ನು ನಿರ್ಮಿಸುವುದು ಮತ್ತು ಹಗ್ಗ ಕಟ್ಟುವ ಆವರಣದ ಸುತ್ತಲೂ ಇದೇ ತೆರೆನಾದ ವೇದಿಕೆಗಳ ನಿರ್ಮಾಣ. (7) ಖೆಡ್ಡದ ವಿಶೇಷ ಅಧಿಕಾರಿಗಳು ಹಾಗೂ ನೌಕರ ವರ್ಗದವರಿಗೆ ವಸತಿ ಮತ್ತು ಆಹಾರ ಸೌಕರ್ಯಗಳನ್ನು ಕಲ್ಪಿಸುವುದು ಮತ್ತು ಜನಗಳಿಗೆ ಹಾಗೂ ಕೂಡಿಡಲ್ಪಟ್ಟ ಆನೆಗಳಿಗೆ ನೀರಿನ ಸೌಲಭ್ಯ ಒದಗಿಸುವುದು. (8) ಆನೆಗಳು ನೀರಿಗಿಳಿಯಬಹುದಾದ ನದೇ ಭಾಗಗಳ ಎರಡೂ ಕಡೆ ಬಿದಿರಿನ ತೇಲುಸೇತುವೆಗಳನ್ನು ನಿರ್ಮಿಸುವುದು. ಷಿಕಾರಿಗಳು ಇವುಗಳ ಮೇಲೆ ನಿಂತು ಆನೆಗಳು ಅಡ್ಡಾದಿಡ್ಡಿ ಓಡದಂತೆ ನೋಡಿಕೊಳ್ಳುತ್ತಾರೆ. (9) ಕಾಡುರಸ್ತೆಗಳ ರಿಪೇರಿ ಹಾಗೂ ಅಲ್ಲಲ್ಲಿ ಷಿಕಾರಿಗಳನ್ನು ನೇಮಿಸುವುದು ಮತ್ತು ದಾರಿಗಳನ್ನು ಸರಿಪಡಿಸಿ, ಅವುಗಳ ಅಂತರವನ್ನು ಅಳೆದು, ಗುರುತಿಗೆಂದು 44 ಗಜಗಳಿಗೊಂದರಂತೆ ಗೂಟಗಳನ್ನು ಹೂಳಿ ಅವುಗಳ ಬಳಿ ಸೌದೆಗಳನ್ನು ಪೇರಿಸುವುದು. ಆನೆಗಳ ಹಿಂಡನ್ನು ಓಡಿಸುವಾಗ ಈ ಸ್ಥಳಗಳಲ್ಲಿ ಷಿಕಾರಿಗಳಿದ್ದು ಬೆಂಕಿಯನ್ನು ಹೊತ್ತಿಸಿಕೊಂಡು ಆನೆಗಳು ತಪ್ಪಿಸಿಕೊಳ್ಳದಂತೆ ಕಾಯುತ್ತಾರೆ. (10) ಉಪಾಹಾರಗೃಹವನ್ನು ತೆರೆಯುವುದು, (11) ಗಾಯಗೊಳ್ಳುವ ಜನಗಳಿಗೂ ಆನೆಗಳಿಗೂ ಅನುಕೂಲವಾಗುವಂತೆ ವೈದ್ಯಾಲಯಗಳನ್ನು ತೆರೆಯುವುದು. (12) ಅಧಿಕಾರಿಗಳಿಗೆ ಪರಸ್ಪರ ಸಂಪರ್ಕ ಕಲ್ಪಿಸುವ ಸಲುವಾಗಿ ವೈರ್‍ಲೆಸ್ ಕೇಂದ್ರವೊಂದನ್ನು ಆರಂಭಿಸುವುದು.

ಇಷ್ಟೆಲ್ಲ ಸಿದ್ಧತೆಗಳು ಮುಗಿದಮೇಲೆ ಅರಣ್ಯ ಅಧಿಕಾರಿಗಳು ಸ್ಥಳೀಯ ಕಾಡು ಕುರುಬರೇ ಮುಂತಾದ ಜನರೊಡನೆ ಕೇರಳ ಹಾಗೂ ಕೊಡಗು ಜಿಲ್ಲೆಯ ಗಡಿಯಲ್ಲಿನ ಉನ್ನತವಾದ ಬೆಟ್ಟ ಪ್ರದೇಶಗಳಲ್ಲಿ ಕಾವಲು ನಿಂತು ಕಾಡಾನೆಗಳ ಸಂಚಾರವನ್ನು ಗಮನಿಸಿ ಹಿಂಡಿನಲ್ಲಿನ ಆನೆಗಳ ಸಂಖ್ಯೆ, ಅವುಗಳು ಹೋಗುವ ದಿಕ್ಕು ಮುಂತಾದವುಗಳ ಬಗ್ಗೆ ಖೆಡ್ಡ ಕಾರ್ಯಾಚರಣೆಯ ಮುಖ್ಯಾಧಿಕಾರಿಗೆ ಮಾಹಿತಿಗಳನ್ನು ಒದಗಿಸುತ್ತಾರೆ. ಎಲ್ಲ ಹಿಂಡುಗಳೂ ಸೆರೆಗೆ ಯೋಗ್ಯವಾಗಿರುವುದಿಲಲ. ಹಿಂಡಿನಲ್ಲಿ ಸಾಕಷ್ಟು ಆನೆಗಳಿರಬೇಕು. ಮುದಿಯಾನೆಗಳೂ ಮರಿಗಳೂ ಹೆಚ್ಚಾಗಿರಬಾರದು. ಇಂಥ ಹಿಂಡುಗಳನ್ನು ಗುರುತಿಸಿ ಹಿಂಬಾಲಿಸಿ ಖೆಡ್ಡದ ಪರಿಧಿಯೊಳಗಿನ ಯಾವುದಾದರೂ ಒಂದು ಆವರಣದೊಳಗೆ ನುಗ್ಗುವಂತೆ ಮಾಡುವುದು ಕೆಲಸ.
ಸಾಕಷ್ಟು ಸಂಖ್ಯೆಯಲ್ಲಿ ಆನೆಗಳು ಆವರಣವೊಂದಕ್ಕೆ ಬಂದಿವೆಯೆಂಬ ಸುದ್ದಿ ತಿಳಿದ ಅನಂತರ ಖೆಡ್ಡದ ಮುಖ್ಯಾಧಿಕಾರಿ ಅವನ್ನು ಸುತ್ತುವರಿಯುವ ಕಾರ್ಯ ಚಟುವಟಿಕೆಗಳನ್ನು ಆರಂಭಿಸಲು ಆಜ್ಞಾಪಿಸುತ್ತಾನೆ. ನದಿಯ ಮೂಲಕ ಹಿಂಡನ್ನು ಓಡಿಸಿ ಖೆಡ್ಡ ಆವರಣದೊಳಕ್ಕೆ ಸೇರಿಸುವ ದಿನಕ್ಕೆ 10-15 ದಿನಗಳ ಮುಂಚೆಯೇ ಸುತ್ತುವರಿಯುವ ಈ ಕಾರ್ಯವನ್ನು ಕೈಗೊಳ್ಳುತ್ತಾರೆ. ಇದಕ್ಕೆ ಬೇಕಾಗುವ ಜನರನ್ನು ಸುತ್ತಮುತ್ತಲಿನ ಹಳ್ಳಿಗಳಿಂದ ಕರೆಸಿ ನೇಮಿಸಿಕೊಳ್ಳಲಾಗುತ್ತದೆ. ಇವರನ್ನು ಪ್ರತಿ ಮೈಲಿಗೆ 40 ಮಂದಿಯಂತೆ (ಒಬ್ಬೊಬ್ಬರಿಗೂ 44 ಗಜ ಅಂತರವಿರುವಂತೆ) ನಿರ್ದಿಷ್ಟ ಪ್ರದೇಶಗಳೆ ಸುತ್ತ ನಿಲ್ಲಿಸಲಾಗುತ್ತದೆ. ಇವರ ಮೇಲ್ವಿಚಾರಣೆಗೆ ಪ್ರತಿ 40 ಮಂದಿಯ ಗುಂಪಿಗೆ ಒಬ್ಬ ರೇಂಜರ್, ಇಬ್ಬರು ಫಾರೆಸ್ಟರುಗಳು. ನಾಲ್ಕು ಜನ ಕಾಪುಗಾರರು, ನಾಲ್ಕು ಜನ ಯಜಮಾನರು ಇರುತ್ತಾರೆ.

ಅಲ್ಲದೆ, ಇವರೆಲ್ಲರ ಮೇಲುಸ್ತುವಾರಿಗೆಂದು ಪ್ರತಿ ಎರಡು ಮೈಲಿಗಳಿಗೊಬ್ಬ ಗಜೆಟೆಡ್ ಅಧಿಕಾರಿಯಿರುತ್ತಾನೆ. ಇಡೀ ದಿನ ಹಗಲು ರಾತ್ರಿ ಎನ್ನದೆ ಬೆಂಕಿಯನ್ನು ಹೊತ್ತಿಸಿ ಉರಿಸಲಾಗುತ್ತದೆ. ಬೆಂಕಿಯನ್ನು ಕಂಡರೆ ಬಹಳ ಹೆದರುವ ಕಾಡಾನೆಗಳು ಈ ಹದ್ದನ್ನು ಮೀರಿ ಹೋಗುವುದಿಲ್ಲ. ಅಕಾಸ್ಮಾತ್ತಾಗಿ ಆನೆಗಳೇನಾದರೂ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದರೆ ಬಿದಿರಿನ ಕಡಕುಗಳನ್ನು ಅಲ್ಲಾಡಿಸುವುದು, ತಮಟೆ ಬಡಿಯುವುದು ಮುಂತಾದವುಗಳಿಂದ ವಿಪರೀತ ಸದ್ದು ಮಾಡಿ ಅವು ಆವರಣದೊಳಗೇ ಇರುವಂತೆ ಮಾಡಲಾಗುತ್ತದೆ. ಕೆಲವು ಬಾರಿ ಆಕಾಶದ ಕಡೆಗೆ ಗುಂಡು ಹಾರಿಸಿ ಆನೆಗಳಿಗೆ ಭಯವನ್ನುಂಟು ಮಾಡುವುದೂ ಉಂಟು. ಹಿಂಡಿನಿಂದ ಒಂದೇ ಆನೆ ತಪ್ಪಿಸಿಕೊಳ್ಳಲು ಬಿಟ್ಟರೂ ಸಾಕು, ಉಳಿದವನ್ನು ಹತೋಟಿಯಲ್ಲಿಡುವುದು ಬಹಳ ಕಷ್ಟವಾಗುತ್ತದೆ.
ಹೀಗೆ ಆನೆಗಳನ್ನು ಸುತ್ತುವರಿದು ಹಿಡಿದಿರುವ ಆವರಣ ಸುಮಾರು 8-10 ಚದರ ಮೈಲಿ ವಿಸ್ತಾರವಾಗಿದು ಸುಮಾರು 20 ಮೈಲಿ ಸುತ್ತಳತೆಯುಳ್ಳದ್ದಾಗಿರುತ್ತದೆ. ಒಂದು ಆವರಣವನ್ನು ಕಾಯಲು ಸುಮಾರು 900-1000 ಷಿಕಾರಿಗಳು, ಅಧಿಕಾರಿಗಳು ಬೇಕಾಗುತ್ತಾರೆ. ಸುತ್ತುವರಿದ ಜನ ನಿಧಾನವಾಗಿ ಮುಂದುವರಿಯುತ್ತ ಹರಡಿರುವ ಆನೆಗಳನ್ನು ಒಂದೆಡೆ ಸೇರುವಂತೆ ಮಾಡುತ್ತಾರೆ. ಆನೆಗಳನ್ನು ನದಿಗೆ ತರುಬಲು ಗೊತ್ತಾಗಿರುವ ದಿನಕ್ಕೆ ಹಿಂದಿನದಿನ ಅವನ್ನು ಕೇವಲ 2 ಚದರ ಮೈಲಿ ಪ್ರದೇಶದಲ್ಲಿ ಗುಂಪುಗೊಡಿಸುತ್ತಾರೆ. ಯಾವುದೇ ಸಂದರ್ಭದಲ್ಲೂ ಇಷ್ಟು ಚಿಕ್ಕ ಪ್ರದೇಶದಲ್ಲಿ ಆನೆಗಳನ್ನು ಒಂದು ದಿನಕ್ಕಿಂತ ಹೆಚ್ಚು ಸಮಯ ಕೂಡಿಡುವಂತಿಲ್ಲ. ಏಕೆಂದರೆ ಮಿತವಾದ ಪ್ರದೇಶದಲ್ಲಿ ಅವಕ್ಕೆ ಮೇವು ನೀರು ಸಾಕಷ್ಟು ಪ್ರಮಾಣದಲ್ಲಿ ದೊರೆಯುವುದಿಲ್ಲವಾದ್ದರಿಂದ ಅವು ಯಾವ ಬೆದರಿಕೆಗೂ ಜಗ್ಗದೆ ಕಾವಲಿನವರನ್ನು ಘಾಸಿಗೊಳಿಸಿ ಅಲ್ಲಿಂದ ತಪ್ಪಿಸಿಕೊಂಡು ಹೋಗಬಹುದು ನದಿಯ ಮೂಲಕ ಕಾಡಾನೆಗಳನ್ನು ಖೆಡ್ಡ ಆವರಣಕ್ಕೆ ಓಡಿಸುವ ದಿನ ಮುಂಜಾನೆ ಹೆಚ್ಚು ಗದ್ದಲ ಮಾಡದೆ, ಆನೆಗಳನ್ನು ಸುಮಾರು ಳಿಚದರ ಮೈಲಿ ಪ್ರದೇಶದೊಳಕ್ಕೆ ಕೂಡಿರಲಾಗುತ್ತದೆ. ಅನಂತರ ನಿಶ್ಚಿತ ಕಾಲಕ್ಕೆ ಸರಿಯಾಗಿ ಹಲವಾರು ಸಾಕಿದ ಆನೆಗಳ ನೆರಳಿನಿಂದ, ಕಾಡಾನೆಗಳನ್ನು ನದಿಗಿಳಿಸಲಾಗುತ್ತದೆ. ಸಾಕಿದ ಆನೆಗಳ ಮೇಲೆ ಬಂದೂ ಹಿಡಿದು ಸನ್ನದ್ಧರಾಗಿ ಕುಳಿತ ಅಧಿಕಾರಿಗಳ ನೇತೃತ್ವದಲ್ಲಿ ಪರಿಣತರಾದ ಷಿಕಾರಿಗಳ ಬಿದಿರಿನ ಕಡಕುಗಳು, ತಮಟೆಗಳನ್ನು ಬಡಿದು ಅಪಾರವಾಗಿ ಸದ್ದು ಮಾಡುತ್ತ, ಬಿದಿರಿನಿಂದ ಮಾಡಿದ ಉರಿಕೊಳ್ಳಿಗಳನ್ನು ಹಿಡಿದು ಬೆದರಿಸುತ್ತ ಹಿಂಡು ನದಿಯ ಕಡೆ ಸಾಗುವಂತೆ ಮಾಡುತ್ತಾರೆ. 15_20 ಗಜಗಳಿಗೆ ಒಂದು ಗುಂಪಿನಂತೆ ಹಲವಾರು ಗುಂಪುಗಳಲ್ಲಿ ಹೀಗೆ ಜನ ಕೂಡಿಕೊಂಡು ಈ ರೀತಿ ಸದ್ದು ಗದ್ದಲವೆಬ್ಬಿಸಿದಾಗ ಆನೆಗಳ ಗುಂಪು ನಿರ್ವಾಹವಿಲ್ಲದೆ ನದಿಯೆಡೆಗೆ ನುಗ್ಗುತ್ತದೆ. ಹೀಗೆ ಬೆದರಿದ ಆನೆಗಳು ಒಂದೆಡೆ ಸೇರುತ್ತಿದ್ದಂತೆ ಅಲ್ಲಿ ಮುಂಚೆಯೇ ಸಂಗ್ರಹಿಸಿಡಲಾದ ಸೌದೆಗೆ ಸೀಮೆಎಣ್ಣೆ ಸುರಿದು ಬೆಂಕಿಯಿಡುತ್ತಾರೆ. ಇದರಿಂದ ಮತ್ತಷ್ಟು ಬೆದರಿದ ಆನೆಗಳು ಸರಸರನೆ ನದಿಯ ಕಡೆಗೆ ಧಾವಿಸುತ್ತವೆ. ಆನೆಯನ್ನು ಬೆದರಿಸಲು ಆಗಿಂದಾಗ್ಗೆ ಹುಸಿಗುಂಡನ್ನು ಹಾರಿಸುವುದೂ, ಅಗತ್ಯ ಬಿದ್ದರೆ ನಿಜವಾದ ಗುಂಡನ್ನು ಹಾರಿಸುವುದೂ ಉಂಟು. ತುಂಬ ಪುಂಡೇಳುವ ಆನೆಗಳಿಗೆ ಏಟು ಬೀಳುವ ಸಂಭವವೂ ಉಂಟು. ಇಷ್ಟೆಲ್ಲ ಒತ್ತಾಯಕ್ಕೆ ಸಿಕ್ಕ ಆನೆಗಳು ಗತ್ಯಂತರವಿಲ್ಲದೆ ನೀರಿಗಿಳಿಯುತ್ತವೆ. ಅವು ನೀರಿಗಿಳಿದ ತತ್‍ಕ್ಷಣ ಷಿಕಾರಿಗಳೂ ಬೇಟೆಯ ಅಧಿಕಾರಿಗಳೂ ಸಾಕಿದ ಆನೆಗಳ ಮೇಲೆ ಕುಳಿತು ಅವನ್ನು ಹಿಂಬಾಲಿಸುತ್ತಾರೆ. ಈ ರೀತಿ ಕಾಡಾನೆಗಳನ್ನು ನದಿಯಲ್ಲಿ ಅಟ್ಟಿಕೊಂಡು ಹೋಗುವ ದೃಶ್ಯ ಬಹಳ ರಮಣೀಯವಾಗಿರುತ್ತದೆ. ನದಿಯ ಆಚೆ ದಡದಲ್ಲಿ ಅಟ್ಟಣೆಗಳ ಮೇಲೆ ಕುಳಿತ ವೀಕ್ಷಕರಿಗೆ ಈಜುವುದು, ಮರಿಗಳು ಕೊಚ್ಚಿ ಹೋಗದಂತೆ ಅವನ್ನು ಸೊಂಡಿಲಿನಿಂದ ಎತ್ತಿ ಹಿಡಿದು ಸಾಗಿಸುವುದು, ಭಯದಿಂದ ಘೀಳಿಡುವುದು, ಸೊಂಡಿಲಿನಿಂದ ನೀರೆರೆಚುವುದು ಮುಂತಾದವು ಬಲು ಆಕರ್ಷಕವಾಗಿರುತ್ತವೆ.

	ಹೀಗೆ ಹಂತಹಂತವಾಗಿ ಆನೆಗಳನ್ನು ಅಟ್ಟಿ ಕೊನೆಗೆ ಇರುವ ಒಂದೇ ಪ್ರವೇಶದ್ವಾರದ ಮೂಲಕ ಖೆಡ್ಡ ಆವರಣದೊಳಕ್ಕೆ ಅವನ್ನು ನುಗ್ಗಿಸಿ ಕೂಡಿಡಲಾಗುತ್ತದೆ. ಆನೆಗಳು ನದಿಯಲ್ಲಿ ಸಾಗುವಾಗ ಆಚೀಚೆ ಹೋಗದಂತೆಯೂ ನದಿಯ ದಡವನ್ನು ಹತ್ತಿ ತಪ್ಪಿಸಿಕೊಳ್ಳದಂತೆಯೂ ನದಿಯ ಎರಡು ದಡಗಳುದ್ದಕ್ಕೂ ಜನ ನಿಂತು ಸದ್ದು ಮಾಡುತ್ತಿರುತ್ತಾರೆ. ಖೆಡ್ಡ ಆವರಣದೊಳಕ್ಕೆ ಆನೆಗಳ ಹಿಂಡು ಸಂಪೂರ್ಣವಾಗಿ ನುಗ್ಗಿದೊಡನೆ ಬಾಗಿಲನ್ನು ಮುಚ್ಚಿ ಭದ್ರಪಡಿಸಿಬಿಡುತ್ತಾರೆ. ಕೂಡಲೆ ಕಂದಕದ ಹೊರಭಾಗದ ಬಳಿ 15 ಗಜಕ್ಕೊಬ್ಬನಂತೆ ಆಳುಗಳು ನಿಂತು ಕಾಯತೊಡಗುತ್ತಾರೆ. ಬೆಂಕಿಯನ್ನು ಉರಿಸುವುದು ಮತ್ತು ಬಿದಿರಿನ ಕಡಕುಗಳಿಂದಲೂ ತಮಟೆಗಳಿಂದಲೂ ಗದ್ದಲ ಮಾಡುವುದು ಏಕಪ್ರಕಾರ ನಡೆಯುತ್ತಲೇ ಇರುತ್ತದೆ.
ಆನೆಗಳನ್ನು ಖೆಡ್ಡ ಆವರಣದೊಳಕ್ಕೆ ಸೇರಿಸಿದ ಮೇಲೆ ಅವಕ್ಕೆ ಸಮೃದ್ಧಿಯಾಗಿ ಮೇವನ್ನೂ ನೀರನ್ನೂ ಒದಗಿಸುತ್ತಿದ್ದು ಒಂದೆರಡು ದಿನಗಳ ಅನಂತರ ಇಲ್ಲವೆ ಇನ್ನೂ ಹೆಚ್ಚುಕಾಲದ ಮೇಲೆ ಅವುಗಳಲ್ಲಿ ಕೆಲಕೆಲವನ್ನು ಆವರಣದಿಂದ ಹೊರಕ್ಕೆ ಬಿಟ್ಟುಕೊಂಡು ಅವುಗಳ ಕಾಲು ಮತ್ತು ಕೊರಳುಗಳಿಗೆ ಭಾರಿ ಭಾರಿ ಹಗ್ಗಗಳನ್ನು ಬಿಗಿದು ಅಲ್ಲಿಂದ ಸಾಗಿಸಿಕೊಂಡು ಹೋಗಿ ಮರಗಳಿಗೆ ಕಟ್ಟಿಹಾಕುವ ಕಾರ್ಯ ನಡೆಯುತ್ತದೆ. ಇದಕ್ಕಾಗಿ ಖೆಡ್ಡ ಆವರಣದ ಬಾಗಿಲಿಂದ ಮುಂದೆ, ಹೊರಭಾಗದಲ್ಲಿ ಕಿರಿದಾದ ಆವರಣವೊಂದನ್ನು ನಿರ್ಮಿಸಲಾಗಿರುತ್ತದೆ. ಈ ಆವರಣಕ್ಕೆ ಹಗ್ಗಬಿಗಿಯುವ ಜಾಗ (ರೋಪಿಂಗ್ ಸ್ಟಾಕೇಡ್) ಎಂದು ಹೆಸರು. ಸುಮಾರು 125` ಒಳಸುತ್ತಳಯುಳ್ಳ ಜಾಗವಿದು.

	ಇದರ ಸುತ್ತ ಮೂರು ಮೂರು ವರಸೆಗಳಲ್ಲಿ ಭಾರಿಮರದ ಕಂಬಗಳನ್ನು ಆಳವಾಗಿ ಹೂಳಲಾಗಿರುತ್ತದೆ. ಇದೇ ಗಾತ್ರದ ಮರಗಳನ್ನು 11/2` ಅಂತರಕ್ಕೊಂದರಂತೆ ಅಡ್ಡಡ್ಡಲಾಗಿ ಹಗ್ಗಗಳಿಂದ ಬಿಗಿದು ಭದ್ರಗೊಳಿಸಿರುತ್ತಾರೆ. ಇದರ ಒಟ್ಟು ಎತ್ತರ ಸುಮಾರು 15` ಇರುತ್ತದೆ. ಇದರ ಮೇಲ್ಭಾಗದಲ್ಲಿ ವೀಕ್ಷಕರು ಕುಳಿತು ಆನೆಗಳಿಗೆ ಹಗ್ಗ ಬಿಗಿಯುವ ಸಾಹಸಕಾರ್ಯವನ್ನು ನೋಡಲು ಅನುಕೂಲವಾಗುವಂತೆ 6` ಅಗಲದ ಅಟ್ಟಣೆಯೊಮದನ್ನು ನಿರ್ಮಿಸಲಾಗಿರುತ್ತದೆ.

	ಹಗ್ಗಗಳಿಂದ ಬಿಗಿಯುವುದು: ಒಂದು ಸಲಕ್ಕೆ 4ರಿಂದ 6 ಆನೆಗಳನ್ನು ಬೇರ್ಪಡಿಸಿ, ಹಗ್ಗಬಿಗಿಯುವ ಆವರಣದೊಳಕ್ಕೆ ಸಾಗಿಸಲಾಗುತ್ತದೆ. ಕಬ್ಬಿನ ಜಲ್ಲೆ, ಬೆಲ್ಲ, ಸೊಪ್ಪುಸದೆಗಳ ಆಶೆ ತೋರಿಸಿ ಇವನ್ನು ಹಗ್ಗ ಕಟ್ಟುವ ಸ್ಥಳಕ್ಕೆ ಕರೆದೊಯ್ಯುತ್ತಾರೆ. ಹಗ್ಗಬಿಗಿಯುವ ಅವರಣ ಮುಖದಲ್ಲೂ ದಪ್ಪನಾದ ಬಾಗಿಲು ಇರುತ್ತದೆ. ಆನೆಗಳು ಈ ಅವರಣದೊಳಕ್ಕೆ ಬಂದಕೂಡಲೆ ಬಾಗಿಲನ್ನು ಮುಚ್ಚಿ ಹಗ್ಗದಿಂದ ಬಿಗಿದು ಭದ್ರ ಮಾಡುತ್ತಾರೆ. ಕಾಡಾನೆಗಳ ಜೊತೆಗೆ 8-10 ಕುಮ್ಕಿ (ಪಳಗಿದ) ಆನೆಗಳನ್ನೂ ಒಳಕ್ಕೆ ಸಾಗಿಸುತ್ತಾರೆ. ಕುಮ್ಕಿ ಆನೆಗಳ ಮೇಲೆ ಪರಿಣತರಾದ ಮಾಹುತರು ಕುಳಿತು ಕಾಡಾನೆಗಳನ್ನು ಎಲ್ಲ ದಿಕ್ಕುಗಳಿಂದಲೂ ಒತ್ತಿ ಅವು ಪುಂಡಾಟ ಮಾಡದಂತೆ ನೋಡಿಕೊಳ್ಳುತ್ತಾರೆ. ಕಾಡಾನೆಗಳಿಗೆ ಹಗ್ಗ ಬಿಗಿಯುವ ಕಲೆಯಲ್ಲಿ ವಿಶೇಷ ಶಿಕ್ಷಣ ಹೊಂದಿರುವ ಅನುಭವಶಾಲಿಗಳಾದ ಇನ್ನೂ ಕೆಲವು ಮಾವುತರು ಹಗ್ಗ ಬಿಗಿಯುವ ಆವರಣದ ಕಂಬಗಳಲ್ಲಿನ ಕಿಂಡಿಗಳಲ್ಲಿ ಮನೆಮಾಡಿಕೊಂಡಿದ್ದು ಪಳಗಿದ ಆನೆಗಳ ಮಧ್ಯೆ ಇರುವ ಕಾಡಾನೆಗಳ ಹಿಂಗಾಲುಗಳಿಗೆ ಹೆಬ್ಬೆರಳು ಗಾತ್ರದ ನೂಲು ಹಗ್ಗಗಳಿಂದ ಹಲವು ಮರಸೆಗಳ ತೊಡಕನ್ನು ಬಿಗಿಯುತ್ತಾರೆ. ಈ ಕಾರ್ಯಕ್ಕೆ ಅನುಕೂಲವಾಗಲೆಂದು ಹಗ್ಗಗಳಿಂದ ಸಡಿಲವಾದ ಕುಣಿಕೆಗಳನ್ನು ಮಾಡಿಕೊಂಡು ಮೊದಲೇ ಆವರಣದ ನೆಲದ ಮೇಲೆ ಹಾಕಲಾಗಿರುತ್ತದೆ. ಕುಮ್ಕಿ ಆನೆಗಳ ಸಹಾಯದಿಂದ ಕಾಡಾನೆಗಳನ್ನು ಒತ್ತರಿಸಿ ಆವು ಕುಣೆಕೆಗಳೊಳಕ್ಕೆ ಕಾಲಿಡುವಂತೆ ಮಾಡಲಾಗುತ್ತದೆ. ಜಾಗರೂಕತೆಯಿಂದ ಗಮನಿಸುತ್ತಿರುವ ಮಾವುತರು ಅವು ಕಾಲಿಟ್ಟ ತಕ್ಷಣ ಕುಣಿಕೆಗಳನ್ನು ಎಳೆದು ಬಿಗಿಯುತ್ತಾರೆ. ಅನಂತರ ರಟ್ಟೆ ಗಾತ್ರದ ಹಗ್ಗಗಳನ್ನು ಇದೇ ರೀತಿ ಬಿಗಿಯಲಾಗುತ್ತಿದೆ. ಆನೆಗೆ ಗೊತ್ತಾಗದೆ ಇರುವಷ್ಟು ಕೈಚಳಕದಿಂದ ಈ ಕೆಲಸ ನಡೆಯುತ್ತದಾದರೂ ಬಂಧನಕ್ಕೊಳಗಾಗಬೇಕೆಂಬ ಸುಳಿವನ್ನು ತಿಳಿದ ಆನೆಗಳು ಭಯಾನಕವಾಗಿ ಘೀಳಿಡುತ್ತ, ರೋಷದಿಂದ ಆವರಣದ ಕಂಬಗಳಿಗೆ ಡಿಕ್ಕಿ ಹೊಡೆದು ವಿರೋಧವನ್ನು ಪ್ರದರ್ಶಿಸುತ್ತವೆ. ಕಾಲುಗಳನ್ನು ಕಟ್ಟಿ ಹಾಕಿದ ಮೇಲೆ ಕುಮ್ಕಿ ಆನೆಗಳ ಸಹಾಯದಿಂದ ಆನೆಗಳ ಕೊರಳಿಗೆ ಹಗ್ಗವನ್ನು ಬಿಗಿಯಲಾಗುತ್ತದೆ. ಕಾಡಾನೆಗಳಿಗೆ ಹಗ್ಗ ಬಿಗಿಯುವ ಕಾರ್ಯ ಬಲು ಜಾಣ್ಮೆಯ ಕೆಲಸ. ಪಳಗಿದ ಆನೆ ಮತ್ತು ಮಾವುತರ ನಡುವೆ ಹೊಂದಾಣಿಕೆಯಿರಬೇಕು. ಯಾವನೊಬ್ಬನೂ ಅಲಕ್ಷ್ಯದಿಂದ ಇರಬಾರದು. ಇಲ್ಲವಾದರೆ ಮಾರಕ ಪರಿಣಾಮಗಳಾಗಬಹುದು.

	ಹೀಗೆ ಎಲ್ಲ ಆನೆಗಳನ್ನೂ ಬಂಧಿಸಿದ ಅನಂತರ, ಅವನ್ನು ಪಳಗಿದ ಆನೆಗಳೆಗೆ ಕಟ್ಟಿ ಎಳೆದುಕೊಂಡು ಹೋಗಿ, ಹೊರಕ್ಕೆ ಸಾಗಿಸಿ ಒಳ್ಳೆಯ ನೆರಳು ಇರುವ ಸ್ಥಳಗಳಲ್ಲಿ ದೊಡ್ಡ ಮರಗಳಿಗೆ ಬೇರೆ ಬೇರೆಯಾಗಿ ಕಟ್ಟಿಹಾಕಲಾಗುತ್ತದೆ. ಇಂಥ ಸ್ಥಳಕ್ಕೆ ಫೀರ್ ಖಾನ ಎಂದು ಹೆಸರು. ಹೀಗೆ ಆನೆಗಳನ್ನು ಕಟ್ಟಿ ಹಾಕಿದ ಮೇಲೆ ಅವು ಬಂಧನದಿಂದ ಪಾರಾಗಲು ಎಳೆದಾಡುತ್ತವೆ. ಎಳೆದಾಡುವ ರಭಸದಲ್ಲಿ ಹಗ್ಗಗಳು ಒತ್ತಿ ಕಾಲಿನ ಚರ್ಮ ಕಿತ್ತು ಹುಣ್ಣಾಗುವ ಸಂಭವ ಉಂಟು. ಇದಕ್ಕೆ ತಕ್ಕ ಚಿಕಿತ್ಸೆಯನ್ನು ನಡೆಸಿ ಆನೆಗಳಿಗೆ ಊನವಾಗದಂತೆ ನೋಡಿಕೊಳ್ಳಲಾಗುತ್ತದೆ. ಅನಂತರ ಸೆರೆ ಹಿಡಿದ ಆನೆಗಳನ್ನು ಕುಮ್ಕಿ ಆನೆಗಳ ಸಹಾಯದಿಂದ ದಿನವೂ ನದಿ ಇಲ್ಲವೆ ಯಾವುದಾದರೂ ನೀರಿನ ನೆಲೆಗೆ ಕರೆದೊಯ್ದು ಅವು ನೀರಿನಲ್ಲಿ ವಿರವಿಸುವಂತೆ ಮಾಡಲಾಗುತ್ತದೆ. ಈ ಕಾಲದಲ್ಲಿ ಇವಕ್ಕೆ ಯಥೇಚ್ಛವಾಗಿ ಸೊಪ್ಪನ್ನೂ, ಹುಲ್ಲನ್ನೂ ಹಾಕಲಾಗುತ್ತದೆ. ಜೊತೆಗೆ ರಾಗಿ ಮುದ್ದೆ, ಕಬ್ಬನ ಬೆಲ್ಲ ಮುಂತಾದುವನ್ನು ತಿನ್ನಿಸುತ್ತಾರೆ. ಕಾಡಾನೆಗಳನ್ನು ಬಂಧಿಸುವ ಕಾರ್ಯ ಮುಗಿದ ದಿನದಿಂದಲೇ ಅವನ್ನು ಪಳಗಿಸುವ ಕಾರ್ಯ ಆರಂಭವಾಗುತ್ತದೆ. ನಿಧಾನವಾಗಿಯೂ ಕ್ರಮಕ್ರಮವಾಗಿಯೂ ನಡೆಯುವ ಈ ಕಾರ್ಯದಲ್ಲಿ ಅನುಭವಿಗಳಾದ ಮಾವುತರು ಬುದ್ಧಿವಂತಿಕೆಯಿಂದ, ಚತುರತೆಯಿಂದ ಕಾರ್ಯನಿರ್ವಹಿಸುತ್ತಾರೆ. ಪಳಗಿಸುವಿಕೆಯಲ್ಲಿ ಎರಡು ವಿಧಾನಗಳುಂಟು. ಒಂದು ವಿಧಾನದಲ್ಲಿ ಹಲವಾರು ಅಂಕಣಗಳುಳ್ಳ ಒಂದು ಮರದ ಕಟಕಟೆಯನ್ನು ಕಟ್ಟಲಾಗುತ್ತದೆ. ಒಂದೊಂದು ಅಂಕಣವೂ ಸೆರೆ ಹಿಡಿದ ಆನೆಯ ಗಾತ್ರಕ್ಕಿಂತ ಕೊಂಚ ದೊಡ್ಡದಾಗಿರುತ್ತದೆ. ಇದರಲ್ಲಿ ಆನೆ ಮಂಡಿಯೂರಿ ಕುಳಿತುಕೊಳ್ಳಲು ಮತ್ತು ನಿದ್ದೆ ಮಾಡಲು ಮಾತ್ರ ಸಾಕಾಗುವಷ್ಟು ಅವಕಾಶವಿರುತ್ತದೆ. ಇಂಥ ಅಂಕಣದೊಳಕ್ಕೆ ಒಂದು ಆನೆಯನ್ನು ಹೊಗಿಸಿ ಹಲವಾರು ದಿನಗಳು ಅದು ಅಲ್ಲಿಯೇ ಇರುವಂತೆ ಮಾಡಲಾಗುತ್ತದೆ. ಅದಕ್ಕೆ ಮೇವು ಮತ್ತು ನೀರನ್ನು ಅಲ್ಲಿಯೇ ಒದಗಿಸಲಾಗುತ್ತದೆ. ಪ್ರತಿ ನಿತ್ಯ 3-4 ಜನ ಅಂಕಣದೊಳಕ್ಕೆ ಸೇರಿಸಲ್ಪಟ್ಟ ಆನೆಯ ಮೈಯನ್ನು ತೆಂಗಿನ ಜುಂಗಿನಿಂದ ಉಜ್ಜುತ್ತಾರೆ. ಮಾನವ ಸ್ಪರ್ಶಕ್ಕೆ ಆನೆ ಒಗ್ಗಿಕೊಳ್ಳಲೆಂಬುದೇ  ಇದರ ಉದ್ದೇಶ. ಕ್ರಮೇಣ ಅದರ ಬೆನ್ನ ಮೇಲೆ ಕುಳಿತುಕೊಳ್ಳುವ ಅಭ್ಯಾಸವೂ ನಡೆಯುತ್ತದೆ. ಅನಂತರ ಪ್ರತಿದಿನವೂ ಆನೆಯನ್ನು ಒಂದೆರಡು ಪಳಗಿದ ಆನೆಗಳ ಸಹಾಯದಿಂದ (ಆದರೆ ಅದಕ್ಕೆ ಇದನ್ನು ಬಂಧಿಸದೆ) ಹೊರತಂದು ಕೊಂಚ ದೂರ ಕರೆದೊಯ್ಯುತ್ತಾರೆ. ಹೀಗೆ 3-4 ತಿಂಗಳುಗಳು ಮಾಡಿದ ಮೇಲೆ ಅದಕ್ಕೆ ಕೆಲವು ಹಗುರವಾದ ಕೆಲಸಗಳನ್ನು ಕೊಟ್ಟು ಮಾಡಿಸುತ್ತಾರೆ. ಕಾಡಾನೆಯ ಎದುರಿನಲ್ಲಿ ಪಳಗಿದ ಆನೆಗಳಿಂದ ಆ ಕೆಲಸಗಳನ್ನು ಮಾಡಿಸಿ ಅದು ಅವನ್ನು ಅನುಕರಿಸುವಂತೆ ಮಾಡುತ್ತಾರೆ.

ಇನ್ನೊಂದು ವಿಧಾನ ಒರಟಾದುದು ಮತ್ತು ಹೆಚ್ಚು ಸಮಯ ಹಿಡಿಯುವಂಥದು. ಇದರಲ್ಲೂ ಮೇಲೆ ಹೇಳಿದ ರೀತಿಯಲ್ಲೆ ಪಳಗಿಸುವ ಕ್ರಮ ನಡೆಯುವುದಾದರೂ ಆನೆಯನ್ನು ಮರಕ್ಕೆ ಕಟ್ಟಿ ಹಾಕಿರುತ್ತಾರೆ.

	ಪ್ರೌಢ ವಯಸ್ಸಿನ ಆನೆಗಳನ್ನು ಪಳಗಿಸಲು 6 ತಿಂಗಳಿನಿಂದ 1 ವರ್ಷದವರೆಗೆ ಬೇಕಾಗುತ್ತದೆ. 6`ಗಳಿಗೂ ಕಡಿಮೆ ಎತ್ತರದ ಕಿರಿವಯಸ್ಸಿನ ಆನೆಗಳನ್ನು ಪಳಗಿಸಲು 3 ತಿಂಗಳುಗಳು ಸಾಕು. ಹೆಚ್ಚು ವಯಸ್ಸಾದವು ಪಳಗುವುದು ಬಹಳ ಕಷ್ಟ. ಪಳಗಿಸಲು ಸಾಧ್ಯವೇ ಇಲ್ಲ ಎನ್ನಬಹುದು. ಇಂಥವನ್ನು ಸಾಮಾನ್ಯವಾಗಿ ಕಾಡಿನೊಳಕ್ಕೆ ಬಿಟ್ಟು ಬಿಡುತ್ತಾರೆ. 		(ಎನ್.ಎಸ್.ಕೆ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ